ಯಜ್ಞಯಾಗ
ಅಗ್ನಿಮುಖ್ಯವಾಗಿರುವ ದೇವರಪೂಜೆ. ವೇದಕಾಲದ ಆರ್ಯ ಒಂದು ಪ್ರಜಾ ವಿಧಾನ. ಈ ಎರಡು ಪದಗಳು ಒಂದೇ ಆಗಿ ಕಂಡರೂ ಅರ್ಥದಲ್ಲಿ ವ್ಯತ್ಯಾಸವಿದೆ. ಯಜ್ಞವನ್ನು ಒಬ್ಬ ವ್ಯಕ್ತಿ ಕುಳಿತು ಮಾಡಲಾಗುವುದಿಲ್ಲ. ಅನೇಕರು ಬೇಕು. ಯಾಗಕ್ಕೆ ಕಳುತುಕೊಳ್ಳವವರನ್ನು ಋತ್ತ್ವಿಕ್ಕುಗಳು ಎನ್ನುತ್ತಾರೆ. ಇದರಲ್ಲಿ ದೇವತೆಗಳನ್ನು ಕರೆದು ಸ್ತುತಿಸುವವ ಒಬ್ಬ. ಅವನೇ ಹೋತೃ, ಯಾಗದಲ್ಲಿ ಮುಖ್ಯವಾಗಿ ಉಪಯೋಗಿಸುವ ಅಗ್ನಿ ಉಪಕರಣಗಳು ಮುಂತಾದ ಸಾಧನೆಗಳು ಮತ್ತು ಹವಿಸ್ಸು ಇವನ್ನು ಮಾಡಬೇಕಾದ ಕ್ರಮವನ್ನು ಅಧ್ವರ್ಯುಮಾಡಿಕೊಳ್ಳುತ್ತಾನೆ. ದೇವತೆಗಳ ಮನಸ್ಸಂತೋಷಪಡಿಸುವ ಸ್ತೋತ್ರಪಠಣವೇ ಉದ್ಗಾತೃವಿನ ಕೆಲಸ. ಹೀಗೆ ಅನೇಕ ಯಜಮಾನದಿಂದ ಕೂಡಿ ಬಹಳ ದಿವಸಗಳತನಕ ನಡೆಯುವ ಕಾರ್ಯಕ್ಕೆ ಯಜ್ಞ ಎಂದು ಕರೆಯುತ್ತಾರೆ.
ಯಜಮಾನ ಒಬ್ಬನೇ ಆಗಿ ದಿನದ ಪರಿಮಿತಿ ಇಲ್ಲದೆ ನಡೆಯುವ ಕಾರ್ಯಕ್ಕೆ ಯಾಗ ಎಂದು ಹೆಸರು. ಯಾಗದಲ್ಲಿ ಯೂಪಸ್ತಂಭವಿರುತ್ತದೆ. ಯೂಪಸ್ತಂಭದ ಅಸ್ತಿತ್ವದಿಂದ ಪಶುಬಲಿ ಉಂಟೆಂದು ಅರ್ಥವಾಗುತ್ತದೆ. ನರಬಲಿಯ ವಿಚಾರ ತಿಳಿಯುತ್ತದೆ. ಸೋಮ, ರಾಜಸೂಯ, ಅಶ್ವಮೇಧಗಳಂಥ ಯಾಗಗಳಲ್ಲಿ ಪಶಾಬಲಿಯನ್ನು ಕಾಣುತ್ತೇವೆ. ಇವುಗಳನ್ನು ಮಹಾಯುಗ ಎನ್ನುವುದುಂಟು. ದರ್ಶ ಪೂರ್ಣಮಾಸ ಮುಂತಾದ ಯಜ್ಞದಲ್ಲಿ ಪಶುಬಲಿ ಇರುವುದಿಲ್ಲ.

ಯಜ್ಞವನ್ನು ಯಾಗ, ಸವ, ಸತ್ರ, ಅಧ್ವರ ಸಪ್ತತಂತು, ಮಖ, ಕ್ರತು, ಇಷ್ಟಿ, ಇಷ್ಟಮ್, ವಿತಾನ್, ಮನ್ಯು, ಅಹವ, ಸವನ, ಹವ, ಅಭಿಷವ, ಹೋಮ, ಹವನ, ಮಹ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ.

ಎಲ್ಲ ಯಜ್ಞವನ್ನು 21 ವಿಭಾಗಳಲ್ಲಿಯೇ ಸೇರಿಸಲಾಗಿದೆ. ಬೇರೆ ಯಾವುದೇ ಯಜ್ಞವಿದ್ದರೂ ಅದೆಲ್ಲವೂ ಇವುಗಳೊಳಗೆ ಸೇರುತ್ತದೆ. ಇವನ್ನು ಸಪ್ತಹವಿರ್ಯಜ್ಞ ಸಪ್ತಪಾಕಯಜ್ಞ ಸಪ್ತಸೋಮಯಜ್ಞ ಎಂದು ವಿಭಾಗಿಸಬಹುದು.

ಅಗ್ನ್ಯಾಧಾನ ಅಥವಾ ಅಗ್ನಿಹೋತ್ರ ದರ್ಶಪೂರ್ಣಮಾಸ, ಪಿಂಡಪಿತೃಯಜ್ಞ, ಅಗ್ರಯಣ, ಚಾತುರ್ಮಾಸ್ಯ, ನಿರೂಢಪಶುಬಂಧ, ಸೌತ್ರಾಮಣಿ ಇವುಗಳನ್ನು ಸಪ್ತ ಸೋಮಯಜ್ಞವೆಮತಲೂ ಕರೆಯುತ್ತಾರೆ. ಇವುಗಳಲ್ಲಿ ಅಗ್ನಿಹೋತ್ರ ದರ್ಶಪೂರ್ಣಮಾಸ, ಚಾತುರ್ಮಾಸ್ಯ, ಪಶುಬಂಧ, ಸೋಮ ಪಂಚಯಜ್ಞವೆಮದು ಪ್ರಸಿದ್ದಿ ಪಡೆದಿದೆ.

ಬ್ರಹ್ಮಯಜ್ಞ (ನಿತ್ಯವೇದಾಧ್ಯಯನ) ಪಿತೃಯಜ್ಞ (ತಂದೆತಾಯಗಳ ಋಣ ತೀರಿಸುವಿಕೆ.) ದೇವಯಜ್ಞ (ದೇವರ್ಷಿತರ್ಪಣ), ಭೂತಯಜ್ಞ (ಪಶುಗಳಿಗೆ ಆಹಾರ ನೀಡುವಿಕೆ) ಮನುಷ್ಯಯಜ್ಞ (ಅತಿಥಿಸತ್ಕಾರ)-ಇವು ವೇದದಲ್ಲಿ ವಿದಿತವಾಗಿರುವ ಪಂಚಮಹಾ ಯಜ್ಞಗಳು.

ಅಲ್ಲದೆ ಸಮ್ಯಕ್‍ದರ್ಶಜ್ಞ. ದೈವಯಜ್ಞ, ಇಮದ್ರಿಯನಿಗ್ರಹಕಯಜ್ಞ, ವಿಷಯಾನುಭವನಿಯಮಯಜ್ಞ, ದೃಢವ್ರತಯಜ್ಞ, ಪ್ರಾಣಾಯಾಮಯಜ್ಞ ಮುಂತಾದ 12 ವಿಧಾವಾದ ಯಜ್ಞಗಳಿವೆ ಎಂದು ಭಗವದ್ಗೀತೆ ತಿಳಿಸುತ್ತದೆ.

ಸ್ತ್ರೀಯರು, ಮಂತ್ರಗಳನ್ನು ತಿಳಿಯದವರು, ಉಪನಯನಸಂಸ್ಕಾರವಿಲ್ಲದವರು. ಅಂಗವಿಹೀನರು ಇವರುಗಳಿಗೆ ಯಜ್ಞಯಾಗಗಳಲ್ಲಿ ಅಧಿಕಾರವಿಲ್ಲ. ದಕ್ಷಿಣೆಯಿಲ್ಲದೆ ಯಜ್ಞ ಯಾಗಾದಿಗಳನ್ನು ಆಚರಿಸಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
    										(ಎನ್.ವಿಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ